ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅನಂತಮೂರ್ತಿ ಅವರನ್ನು ನಿನ್ನೆ ಬೆಳಗ್ಗೆ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಂಜೆ 6 ಗಂಟೆ ವೇಳೆಗೆ ಲಘು ಹೃದಯಾಘಾತವಾಗಿ, ನಂತರ ಚೇತರಿಕೆ ಕಾಣದೆ ಕೊನೆಯುಸಿರೆಳೆದರು ಎಂದು ಮಣಿಪಾಲ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಸುದರ್ಶನ್ ಬಲ್ಲಾಳ್ ತಿಳಿಸಿದರು.
ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠವನ್ನು ಕನ್ನಡಕ್ಕೆ ತಂದ ಆರನೇಯವರು. ಸಮಗ್ರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ. 1998ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಕೇಂದ್ರ ಸರ್ಕಾರ ಗೌರವಿಸಿತ್ತು.
ಇಂಗ್ಲೀಷ್ ಮತ್ತು ತೌಲನಿಕ ಸಾಹಿತ್ಯ ಕುರಿತು ಪಿಎಚ್‌ಡಿ(ಬರ್ಮಿಂಗ್‌ಹ್ಯಾಮ್ ವಿವಿ, ಯುನೈಟೆಡ್ ಕಿಂಗ್‌ಡಂ) 1966. ಸಂಸ್ಕೃತ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
1970ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲೇ ಇಂಗ್ಲೀಷ್ ಬೋಧಕರಾಗಿ ಸೇವೆ ಆರಂಭಿಸಿ ತದ ನಂತರ 1987ರಲ್ಲಿ ಕೇರಳದ ತಿರುವಂತನಪುರಂನಲ್ಲಿರುವ ಕೇರಳ ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಗಳಾಗಿದ್ದರು. 1993ರಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಜವಹರಲಾಲ್ ನೆಹರು ವಿಶ್ವವಿದ್ಯಾಲಯ, ಈಬರ್‌ಹಾರ್ಡ್ ವಿಶ್ವವಿದ್ಯಾಲಯ, ಲೋವಾ ವಿಶ್ವವಿದ್ಯಾಲಯ, ಟಫ್ಟ್ಸ್ ವಿಶ್ವವಿದ್ಯಾಲಯ, ಶಿವಾಜಿ ವಿಶ್ವವಿದ್ಯಾಲಯದಲ್ಲಿ ಸೇರಿದಂತೆ ಭಾರತ ಮತ್ತು ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದ್ದಾರೆ.
ಸಂಸ್ಕಾರ, ಭವ, ಭಾರತೀಪುರ ಮತ್ತು ಅವಸ್ಥೆ ಕಾದಂಬರಿಗಳು ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಇವರ ಅನೇಕ ಪುಸ್ತಕಗಳು ಯೂರೋಪಿಯನ್ ಭಾಷೆ ಸೇರಿದಂತೆ ಭಾರತ ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿದೆ. ಅವರು ಬರೆದಂತಹ ಕಾದಂಬರಿಗಳಲ್ಲಿ ಕೆಲವು ಚಲನಚಿತ್ರವಾಗಿ ಮೂಡಿ ಬಂದಿದೆ.
ವೈಯಕ್ತಿಕವಾಗಿ ನನಗೆ ಒಳ್ಳೆಯ ಸ್ನೇಹಿತ. ಕನ್ನಡ ಸಾಹಿತ್ಯವನ್ನು ಹೆಚ್ಚು ಶ್ರೀಮಂತಗೊಳಿಸಿದವರು. ಹಳೆಯ ಕಂದಾಚಾರ, ಅನಿಷ್ಟ ಪದ್ದತಿಗಳ ವಿರುದ್ಧ ದನಿ ಎತ್ತಿದ ಧೀಮಂತ ಸಾಹಿತಿ
-ಸಿದ್ದರಾಮಯ್ಯ ಮುಖ್ಯಮಂತ್ರಿ
ನಂತಮೂರ್ತಿ ನಿಧನದಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಹಾಗೂ ಅವರ ಕುಟುಂಬಕ್ಕೆ ಈ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ದಯಪಾಲಿಸಲಿ
-ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಸಾಹಿತ್ಯ ಲೋಕಕ್ಕೆ ಹೊಸ ಭಾಷ್ಯಾ ಬರೆದ ಸಾಹಿತಿ. ತಮ್ಮ ನಿಲುವನ್ನು ತೀಕ್ಷ್ಣವಾಗಿ ಬರೆಯುತ್ತಿದ್ದ ಸಾಹಿತಿಯಾಗಿದ್ದರು
-ಜಯಂತ್ ಕಾಯ್ಕಿಣಿ, ಸಾಹಿತಿ
ಅನಂತಮೂರ್ತಿ ದಿಟ್ಟ ಹೋರಾಟಗಾರ ತಮ್ಮ ಸಾಹಿತ್ಯದ ಮೂಲಕವೇ ಕೆಲವೊಂದು ಬದಲಾವಣೆಗಳನ್ನು ತಂದರು
-ಎಸ್.ಜಿ. ಸಿದ್ದರಾಮಯ್ಯ, ಸಾಹಿತಿ.
ಅನಂತಮೂರ್ತಿಯವರು ವಿಶ್ವ ವಿಖ್ಯಾತ ಬರಹಗಾರರು, ಅವರ ಬಗ್ಗೆ ವಿದೇಶದಲ್ಲಿನ ಕೆಲ ಸಾಹಿತಿಗಳು ಮಾತನಾಡುತ್ತಿದ್ದರು. ಅನಂತಮೂರ್ತಿ ಪರಿಸರ ಬಗೆಗಿನ ವೈಚಾರಿಕ ಸಾಹಿತಿ
-ಪ್ರೋ. ದೊಡ್ಡರಂಗೇಗೌಡ, ಸಾಹಿತಿ
- ಬಷೀರ್ ಪುರಸ್ಕಾರಂ, ಕೇರಳ, 2012
- ಗೌರವ ಡಾಕ್ಟರೇಟ್, ಕೇಂದ್ರೀಯ ವಿವಿ, ಗುಲ್ಬರ್ಗ, 2012
- ಗೌರವ ಡಾಕ್ಟರೇಟ್, ಕಲ್ಕತ್ತಾ ವಿವಿ, 2012
- ರವೀಂದ್ರನಾಥ್ ಟ್ಯಾಗೋರ್ ಸ್ಮಾರಕ ಪದಕ, ಕಲ್ಕತ್ತಾ ವಿವಿ, 2012
- ಫಕೀರ್ ಮೋಹನ್ ಸೇನಾಪತಿ ರಾಷ್ಟ್ರೀಯ ಪುರಸ್ಕಾರ, ಒರಿಸ್ಸಾ, 2012
- ದಿ ಹಿಂದೂ ಲಿಟರೆರಿ ಪ್ರಶಸ್ತಿ, 2011
- ಗಣಕ್‌ಸೃಷ್ಟಿ ಪ್ರಶಸ್ತಿ, ಕೊಲ್ಕತ್ತ, 2002
- ಕನ್ನಡ ವಿಶ್ವವಿದ್ಯಾಲಯದಿಂದ 'ನಾಡೋಜ' 2008
- ಪದ್ಮಭೂಷಣ, 1998
- ಮಾಸ್ತಿ, 1995
- ಜ್ಞಾನಪೀಠ ಪ್ರಶಸ್ತಿ, 1994
- ರಾಜ್ಯೋತ್ಸವ ಪ್ರಶಸ್ತಿ, 1984